ಕೊರಕ ಜೀರುಂಡೆಗಳು

ಸಸ್ಯಗಳ ವಿವಿಧ ಅಂಗಗಳನ್ನು ಕೊರೆದು ಒಳಗಿನ ಅಂಗಾಂಶಗಳನ್ನು ಭಕ್ಷಿಸಿ ಸಸ್ಯಗಳಿಗೆ ಹಾನಿಯುಂಟುಮಾಡುವ ಕೀಟಗಳು (ಬೋರರ್ ಬೀಟಲ್ಸ್), ಕೀಟವರ್ಗದ ಲೆಪಿಡಾಪ್ಟರ, ಕೋಲಿಯಾಪ್ಟರ, ಮತ್ತು ಡಿಪ್ಟರ ಗಣಗಳಿಗೆ ಸೇರಿದ ಹಲವಾರು ಬಗೆಯ ಕೀಟಗಳಿಗೆ ಈ ಹೆಸರಿದೆ. ಕೊರಕ (ಬೋರರ್) ಎಂಬ ಪದವನ್ನು ಸಾಮಾನ್ಯವಾಗಿ ಸಸ್ಯದ ಯಾವುದಾದರೊಂದು ಭಾಗದೊಳಕ್ಕೆ ಕೊರೆದುಕೊಂಡು ಹೋಗಿ ಒಳಗಿನ ಅಂಗಾಂಶಗಳನ್ನು ಭಕ್ಷಿಸುವ ಕೀಟಕ್ಕೆ ಅನ್ವಯಿಸುವುದು ವಾಡಿಕೆ. ಈ ದೃಷ್ಟಿಯಿಂದ ಗಿಡದ ಮೇಲ್ಮೈಯಲ್ಲಿನ ಅಂಗಾಂಶಗಳನ್ನು ಭಕ್ಷಿಸುವ ಕೀಟಗಳಿಂದ ಕೊರಕ ಜೀರುಂಡೆಗಳು ವಿಭಿನ್ನವಾಗಿರುವುವಾದರೂ ವಾಸ್ತವವಾಗಿ ಸಸ್ಯಗಳ ಹೊರಭಾಗಕ್ಕೆ ಘಾಸಿ ಉಂಟುಮಾಡುವ ಕೀಟ ಕ್ರಮೇಣ ಕೊರಕವಾಗುವ ಸಾಧ್ಯತೆಯೂ ಉಂಟು.

	ಕೊರಕ ಜೀರುಂಡೆಗಳ ಹಾವಳಿಗೆ ಸಸ್ಯಗಳ ಎಲ್ಲ ಮುಖ್ಯಾಂಗಗಳೂ-ಬೇರು, ಕಾಂಡ, ಚಿಗುರು, ಮೊಗ್ಗು, ಹೀಚು, ಹಣ್ಣು, ಎಲೆ-ತುತ್ತಾಗುತ್ತವೆ. ಸಾಮಾನ್ಯವಾಗಿ ಈ ಕೀಟಗಳ ಮರಿ ಇಲ್ಲವೆ ಡಿಂಬ ಸಸ್ಯಗಳನ್ನು ಕೊರೆದು ಹಾನಿ ಮಾಡುವುದಾದರೂ ಬಲಿತ ಜೀರುಂಡೆ ಗಿಡವನ್ನು ಕೊರೆಯುವ ನಿದರ್ಶನಗಳಿಲ್ಲವೇ ಇಲ್ಲ.

	ಕೋಲಿಯಾಪ್ಟರ ಗಣದ ಕೊರಕಗಳು ಡೈನಾಸ್ಟಿಡೀ, ಬ್ಯೂಪ್ರೆಸ್ಟಿಡೀ, ಸೆರಾಂಬೈಸಿಡೀ, ಬ್ರೂಕಿಡೀ, ಆಂಥ್ರಿಬಿಡೀ, ಕಕ್ರ್ಯೂಲಿಯಾನಿಡೀ ಮತ್ತು ಸ್ಕೊಲೈಟಿಡೀ ಕುಟುಂಬಗಳಿಗೆ ಸೇರಿವೆ. ಬೇರೆ ಕುಟುಂಬಗಳಲ್ಲಿ ಕೊರಕ ಕೀಟದ ಲಕ್ಷಣಗಳುಳ್ಳ ಕೀಟಗಳಿಲ್ಲವೆಂದಾಗಲೀ ಇಲ್ಲಿ ಪಟ್ಟಿ ಮಾಡಲಾದ ಕುಟುಂಬಗಳ ಎಲ್ಲ ಪ್ರಭೇದಗಳೂ ಕೊರಕಗಳೆಂದಾಗಲೀ ಅಲ್ಲ.

	ಮೇಲೆ ಹೇಳಿದ ಕುಟುಂಬಗಳ ಡಿಂಬಗಳನ್ನು ಎದೆಭಾಗದಲ್ಲಿ ಮೂರು ಜೊತೆ ಕಾಲುಗಳುಳ್ಳವು, ಆದರೆ ಉದರ ಭಾಗಕ್ಕೆ ಸೇರಿದಂತೆ ಉಪಪಾದಗಳಿಲ್ಲದವು ಎಂದೂ ಎದೆಭಾಗದ ಪಾದಗಳೂ ಉಪಪಾದಗಳೂ ಇಲ್ಲದವು ಎಂದೂ ಎರಡು ಸ್ಥೂಲ ವಿಭಾಗಗಳಾಗಿ ವಿಂಗಡಿಸಬಹುದು. ಕಕ್ರ್ಯೂಲಿಯಾನಿಡೀ ಕುಟುಂಬದ ಕೀಟಗಳು ಎರಡನೆಯ ಬಗೆಯವು. (ಕೋಲಿಯಾಪ್ಟರ ಗಣದ ಡಿಂಬಗಳಿಗೆ ಗ್ರಬ್ ಎಂಬ ವಿಶೇಷ ಹೆಸರಿದೆಯೆಂಬುದನ್ನು ಇಲ್ಲಿ ಗಮನಿಸಬಹುದು). ಸಾಮಾನ್ಯವಾಗಿ ಹೊರವಾತಾವರಣದ ಸಂಪರ್ಕವಿಲ್ಲದುದರಿಂದ ಕೊರಕ ಗ್ರಬ್‍ಗಳ ಮೈಬಣ್ಣ ವರ್ಣಮಯವಾಗಿರದೆ ಮಾಸಲು ಬಿಳುಪಿನಿಂದ ಹಿಡಿದು ಹಳದಿ ಛಾಯಾಂತರಗಳಿಂದ ಕೂಡಿದೆ. (ನೋಡಿ- ಕಾಂಡಕೊರಕ-ಜೀರುಂಡೆಗಳು)

	ಬೇರು ಕೊರೆಯುವ ಜೀರುಂಡೆಗಳು: ಬ್ಯೂಪ್ರೆಸ್ಟಿಡೀ ಕುಟುಂಬದ ಸ್ಫೀನಾಪ್ಟರ ಪೆರೋಟೆಟಿ ಎಂಬುದು ಹೊಳೆಯುವ ಕಂದುಬಣ್ಣದ್ದು; ಇದಕ್ಕೆ ಜುಯೆಲ್ ಬೀಟಲ್ ಎಂಬ ಹೆಸರಿದೆ. ಇದರ ಮಾಸಲು ಬಿಳಿ ಬಣ್ಣದ, ಚಪ್ಪಟೆ ತಲೆಯುಳ್ಳ ಡಿಂಬ ಭೂಮಟ್ಟದಲ್ಲಿ ಕಡಲೇಕಾಯಿ ಗಿಡಗಳ ಕಾಂಡ ಮತ್ತು ಬೇರು ಭಾಗಗಳನ್ನು ಕೊರೆದು ಅವು ಸಾಯಲು ಕಾರಣವಾಗುತ್ತದೆ.

	ಚಿಗುರು ಕೊರೆಯುವ ಜೀರುಂಡೆಗಳು: ಕಕ್ರ್ಯೂಲಿಯಾನಿಡೀ ಕುಟುಂಬದ, ಆಲ್ಸಿಡೋಡೀಸ್ ಬ್ಯೂಬೊ ಎಂಬುದು ಅಗಸೆಗಿಡದ ಚಿಗುರನ್ನೂ ಆಲ್ಸಿಡೋಡೀಸ್ ಅಫಾಬರ್ ಎಂಬ ಪ್ರಭೇದ ಹತ್ತಿಗಿಡದ ಚಿಗುರುಗಳನ್ನೂ ಕೊರೆದು ಅವು ಬಾಡಲು ಕಾರಣವಾಗುತ್ತವೆ. ಇದೇ ಕುಟುಂಬದ ಸ್ಯೂಥೋರಿಂಕಸ್ ಆಸ್ಟರ್ಯುಲಸ್ ಎಂಬ ಜೀರುಂಡೆ ತೊಗರಿ ಗಿಡಗಳ ಮತ್ತು ಓಕಿರೋಮೀರ ಆರ್ಟೊಕಾರ್ಪಿ ಎಂಬ ಪ್ರಭೇದ ಹಲಸಿನ ಮೊಗ್ಗು ಮತ್ತು ಚಿಗುರುಗಳನ್ನು ಕೊರೆಯುತ್ತವೆ.

	ಎಲೆ ಕೊರೆಯುವ ಜೀರುಂಡೆಗಳು: ಬ್ಯೂಪ್ರೆಸ್ಟಿಡೀ ಕುಟುಂಬದ ಟ್ರಾಕಿಸ್ ಐಪೋಮಿಯೆ ಎಂಬ ಜೀರುಂಡೆಯ ಡಿಂಬ ಗೆಣಸಿನ ಎಲೆಯನ್ನು ಕೊರೆದು ಸುರಂಗವನ್ನು ನಿರ್ಮಿಸುತ್ತದೆ. ಕಕ್ರ್ಯೂಲಿಯಾನಿಡೀ ಕುಟುಂಬದ ರಿಂಕೇಸಸ್ ಮ್ಯಾಂಜಿಫೆರೀ ಎಂಬ ಜೀರುಂಡೆ ಮಾವಿನ ಎಲೆಗಳನ್ನು ಕೊರೆಯುತ್ತದೆ.

	ಹಣ್ಣುಗಳನ್ನು ಕೊರೆಯುವ ಜೀರುಂಡೆಗಳು: ಕಕ್ರ್ಯೂಲಿಯಾನಿಡೀ ಕುಟುಂಬಕ್ಕೆ ಸೇರಿದ ಕ್ರಿಪ್ಟೊರಿಂಕಸ್ ಮ್ಯಾಂಜಿಫೆರೀ (ಮಾವಿನ ಓಟೆಯ ಸೊಂಡಿಲು ಜೀರುಂಡೆ) ಎಂಬುದು ಗಿಡದ ಮೇಲೆ ಮಾಗುತ್ತಿರುವ ಮಾವಿನ ಕಾಯಿಯ ಸಿಪ್ಪೆಯ ಕೆಳಗೆ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯೊಡೆದು ಹೊರಬರುವ ಡಿಂಬ ತಿರುಳಿನ ಮೂಲಕ ಹಾದು ಬಲಿಯುತ್ತಿರುವ ಓಟೆಯನ್ನು ಹೊಕ್ಕು ಅದರೊಳಗೆ ಕೋಶಾವಸ್ಥೆಯನ್ನು ತಲುಪುತ್ತದೆ.

	ಆಂಥ್ರಿಬಿಡೀ ಕುಟುಂಬದ ಅರೀಸೀರಸ್ ಫ್ಯಾಸಿಕ್ಯುಲೇಟಸ್ ಎಂಬ ಜೀರುಂಡೆಯ ಡಿಂಬ ಕಾಫಿ ಮತ್ತು ಅಡಿಕೆ ಕಾಯಿಗಳನ್ನು ಕೊರೆಯುತ್ತವೆ.

ಬೀಜಗಳನ್ನು ಕೊರೆಯುವ ಜೀರುಂಡೆಗಳು: ಬ್ರೂಕಿಡೀ ಕುಟುಂಬದ ಬ್ರೂಕಸ್ ಮತ್ತಿತರ ಜಾರಿಯ ಜೀರುಂಡೆಗಳ ಡಿಂಬಗಳು ಶೇಖರಿಸಿಟ್ಟ ದ್ವಿದಳ ಧಾನ್ಯಗಳನ್ನು ಕೊರೆದು ಅವನ್ನು ಟೊಳ್ಳು ಮಾಡಿ ಹಾಳುಮಾಡುತ್ತವೆ. 

ತೆಂಗಿನ ಜೀರುಂಡೆ: ಡೈನಾಸ್ಟಿಡೀ ಕುಟುಂಬದ ರೈನಾಸೆರಸ್ ಜೀರುಂಡೆಯೆಂಬುದು ಪ್ರೌಢಾವಸ್ಥೆಯಲ್ಲೇ ತೆಂಗಿನ ಸುಳಿಯನ್ನು ಕೊರೆದು ಹಾನಿಯುಂಟುಮಾಡುತ್ತದೆ.  							 (ಡಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ